ಇಂಧನ ಸಂಕಷ್ಟ, ಆಳ ಸಮುದ್ರ ಮೀನುಗಾರಿಕೆಗೆ ಆತಂಕ
ಕರಾವಳಿ ಆರ್ಥಕತೆ ಜೀವಾಳವೇ ಮೀನುಗಾರಿಕೆ. ಮಧ್ಯಪ್ರಾಚ್ಯದ ಯುದ್ಧದ ಬಿಸಿ ಮೀನುಗಾರಿಕೆಗೂ (fishing) ತಟ್ಟಿದೆ. ಕರಾವಳಿಯಲ್ಲಿ ಮೀನುಗಾರಿಕೆಗೆ ದೊಡ್ಡ ಸಂಕಷ್ಟ ಎದುರಾಗಿದೆ.
ಡೀಸೆಲ್ ಕೊರತೆಯಿಂದಾಗಿ ಆಳ ಸಮುದ್ರ ಮೀನುಗಾರಿಕೆ ತೀವ್ರ ಆತಂಕಕ್ಕೆ ಒಳಗಾಗಿದೆ. ಪ್ರತಿದಿನ ಲಕ್ಷಾಂತರ ಲೀಟರ್ ಡೀಸೆಲ್ ಅವಲಂಬಿಸಿರುವ ಮೀನುಗಾರರು ಈಗ ಸಂಕಷ್ಟದ ಅಂಚಿನಲ್ಲಿದ್ದಾರೆ. ಕರಾವಳಿಯ ಆಳ ಸಮುದ್ರ ಮೀನುಗಾರಿಕೆ ಸಂಪೂರ್ಣವಾಗಿ ಡೀಸೆಲ್ ಪೂರೈಕೆಯನ್ನು ಅವಲಂಬಿಸಿದೆ. ಉಡುಪಿ-ಮಂಗಳೂರು ಭಾಗದಲ್ಲಿ ಪ್ರತಿದಿನ ೧೦ ರಿಂದ ೧೨ ಲಕ್ಷ ಲೀಟರ್ ಡೀಸೆಲ್ ಬಳಕೆಯಾಗುತ್ತಿದೆ. ಪ್ರತಿ ಬೋಟಿಗೆ ಸುಮಾರು ಸಾವಿರ ಲೀಟರ್ ಡೀಸೆಲ್ ಅಗತ್ಯವಿದೆ. ಆದರೆ ಇತ್ತೀಚೆಗೆ ಉಂಟಾದ ಡೀಸೆಲ್ ಕೊರತೆಯ ಸಮಸ್ಯೆ ಮೀನುಗಾರರ ಬದುಕಿನ ಮೇಲೆ ಬಿಸಿ ತಟ್ಟಲು ಆರಂಭಿಸಿದೆ. ಒಂದುವರೆ ಸಾವಿರಕ್ಕೂ ಅಧಿಕ ಬೋಟುಗಳು ಈ ಡೀಸೆಲ್ ಪೂರೈಕೆಯ ಮೇಲೆ ಅವಲಂಬಿತವಾಗಿವೆ. ಡೀಸೆಲ್ ಇಲ್ಲದೆ ಸಮುದ್ರಕ್ಕೆ ಹೋಗೋದು ಅಸಾಧ್ಯ. ಸಬ್ಸಿಡಿ ಸಿಗದಿದ್ದರೂ ಪರವಾಗಿಲ್ಲ. ನಮಗೆ ಡೀಸೆಲ್ ಬೇಕು ಡಿಸೇಲ್ ಸಿಕ್ರೆ ಸಾಕು ಅನ್ನುವ ಅಭಿಪ್ರಾಯ ಮೀನುಗಾರರದ್ದು.
ಡೀಸೆಲ್ ಕೊರತೆಯ ಆತಂಕ ಹೆಚ್ಚಾದ ಹಿನ್ನೆಲೆ, ಶಾಸಕ ಯಶ್ಪಾಲ್ ಸುವರ್ಣ ಹಾಗೂ ಎರಡು ಜಿಲ್ಲೆಯ ಸಂಸದರು ದೆಹಲಿಗೆ ದೌಡಾಯಿಸಿದ್ದಾರೆ. ಮೀನುಗಾರಿಕೆಯನ್ನು ಆದ್ಯತಾವರ್ಗದಲ್ಲಿ ಪರಿಗಣಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಮಲ್ಪೆ ಬಂದರು ಏಷ್ಯಾದ ಅತಿ ದೊಡ್ಡ ಮೀನುಗಾರಿಕಾ ಬಂದರುಗಳಲ್ಲಿ ಒಂದು. ಸಾವಿರಾರು ಕೋಟಿ ರೂಪಾಯಿ ವ್ಯವಹಾರ ಮೀನುಗಾರಿಕೆಯನ್ನು ಅವಲಂಬಿಸಿದೆ. ಇನ್ನೂ ೪೫ ದಿನಗಳ ಮೀನುಗಾರಿಕಾ ಸೀಸನ್ ಬಾಕಿಯಿರುವ ಸಂದರ್ಭದಲ್ಲೇ ಡೀಸೆಲ್ ಕೊರತೆ ಆತಂಕ ಹೆಚ್ಚಿಸಿದೆ. ಸದ್ಯ ಕೇಂದ್ರ ಸಚಿವರು ಆದ್ಯತೆಯಿಂದ ಡೀಸೆಲ್ ಪೂರೈಕೆ ಮಾಡುವ ಭರವಸೆ ನೀಡಿದ್ದಾರೆ.

Leave a Reply