ಕಿಮ್ ಪರ ೯೯.೯೩% ಮತ ಬಿದ್ದರೂ ೦.೦೭% ಹೋಗಿದ್ದು ಯಾರಿಗೆ

ಉತ್ತರ ಕೊರಿಯಾ ಸಂಸತ್ ಚುನಾವಣೆಯಲ್ಲಿ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರ ವರ್ಕರ್ಸ್ ಪಾರ್ಟಿ ಆಫ್ ಕೊರಿಯಾ ಮತ್ತು ಮಿತ್ರ ಗುಂಪುಗಳು ೯೯.೯೩% ಮತ ಪಡೆದು  ಭರ್ಜರಿ ಜಯಗಳಿಸಿದ್ದರೂ ೦.೦೭% ಮತ ಹೋಗಿದ್ದು ಯಾರಿಗೆ? –  ವಿಶ್ವಾದ್ಯಂತ ಭಾರೀ ಸದ್ದು ಮಾಡಿದ್ದ ಈ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.

ಮಾರ್ಚ್ ೧೫ ರಂದು ೧೫ ನೇ ಸುಪ್ರೀಂ ಪೀಪಲ್ಸ್ ಅಸೆಂಬಿ ಸದಸ್ಯರನ್ನು ಆಯ್ಕೆ ಮಾಡಲು ನಡೆದ ಚುನಾವಣೆಯಲ್ಲಿ ಆಡಳಿತ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಪ್ರತಿಯೊಂದು ಸ್ಥಾನವನ್ನು ಗೆದ್ದಿದ್ದಾರೆ ಎಂದು ಸರ್ಕಾರಿ ಮಾಧ್ಯಮ ಕೊರಿಯನ್ ಸೆಂಟ್ರಲ್ ನ್ಯೂಸ್ ಏಜೆನ್ಸಿ ತಿಳಿಸಿದೆ.

ನೋಂದಾಯಿತ ಮತದಾರರಲ್ಲಿ ಕೇವಲ ೦.೦೦೩೭ ಪ್ರತಿಶತದಷ್ಟು ಜನರು ವಿದೇಶದಲ್ಲಿ ಅಥವಾ ಸಮುದ್ರದಲ್ಲಿ ಕೆಲಸ ಮಾಡುತ್ತಿದ್ದರಿಂದ ಅವರಿಗೆ ಮತವನ್ನು ಚಲಾಯಿಸಲು ಸಾಧ್ಯವಾಗಲಿಲ್ಲ. ಆದರೆ ಅತ್ಯಂತ ಕಡಿಮೆ ಸಂಖ್ಯೆಯ ಸುಮಾರು ೦.೦೦೦೦೩ ಪ್ರತಿಶತದಷ್ಟು ಜನರು ಮತದಾನ ಪ್ರಕ್ರಿಯೆಯಿಂದ ದೂರವಿದ್ದರು ಎಂದು ಹೇಳಿಕೊಂಡಿದೆ.

ಈ ಚುನಾವಣೆಯಲ್ಲಿ ಯಾವುದೇ ವಿರೋಧ ಪಕ್ಷದ ಅಭ್ಯರ್ಥಿಗಳು ಇರದ ಕಾರಣ ಪ್ರತಿಸ್ಪರ್ಧಿಗೆ ಮತ ಹೋಗಿಲ್ಲ. ಪ್ರತಿ ಕ್ಷೇತ್ರದಲ್ಲಿ ಮತದಾರರಿಗೆ ಕಣದಲ್ಲಿರುವ ಅಭ್ಯರ್ಥಿಯನ್ನು ಸ್ವೀಕರಿಸಬೇಕು ಅಥವಾ ತಿರಸ್ಕರಿಸಬೇಕು ಎಂಬ ಆಯ್ಕೆಯನ್ನು ಮಾತ್ರ ನೀಡಲಾಗಿತ್ತು. ಮತ ಹಾಕಿದವರ ಪೈಕಿ ೯೯.೯೩% ರಷ್ಟು ಮಂದಿ ಸರ್ವಾಧಿಕಾರಿಯ ಅಭ್ಯರ್ಥಿಗಳನ್ನು ಬೆಂಬಲಿಸಿದ್ದರೆ ೦.೦೭% ರಷ್ಟು ಜನ ವಿರೋಧಿಸಿ ಮತ ಹಾಕಿದ್ದಾರೆ.

೧೯೫೭ ರಿಂದ ಸರ್ವಾಧಿಕಾರಿ ಅಭ್ಯರ್ಥಿಗೆ ಉತ್ತರ ಕೊರಿಯಾದ ಜನತೆ ಮತ ಹಾಕುತ್ತಿದ್ದರು. ಆದರೆ ಉತ್ತರ ಕೊರಿಯಾದ ಸರ್ಕಾರಿ ಮಾಧ್ಯಮ ಸಂಸತ್ತಿನ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ತಿರಸ್ಕರಿಸಿದ ವಿಚಾರವನ್ನು ಬಹಿರಂಗ ಪಡಿಸಿದ್ದು ಇದೇ ಮೊದಲು. ದೇಶದ ಚುನಾವಣಾ ಕಾನೂನುಗಳ ಪ್ರಕಾರ, ಕಾರ್ಮಿಕರು, ರೈತರು, ಬುದ್ಧಿಜೀವಿಗಳು, ಮಿಲಿಟರಿ ಸಿಬ್ಬಂದಿ ಮತ್ತು ಅಧಿಕಾರಿಗಳು ಸೇರಿದಂತೆ ಒಟ್ಟು ೬೮೭ ಪ್ರತಿನಿಧಿಗಳನ್ನು ಸುಪ್ರೀಂ ಪೀಪಲ್ಸ್ ಅಸೆಂಬ್ಲಿಗೆ ಆಯ್ಕೆ ಮಾಡಲಾಗಿದೆ.

೨೦೧೧ ರಲ್ಲಿ ತಂದೆ ಕಿಮ್ ಜಾಂಗ್ ಇಲ್ ನಿಧನರಾದ ನಂತರ ಕಿಮ್ ಜಾಂಗ್ ಉನ್ ಅಧಿಕಾರ ಸ್ವೀಕರಿಸಿದ್ದಾರೆ. ೨೦೧೯ ರಲ್ಲಿ ಉತ್ತರ ಕೊರಿಯಾ ತನ್ನ ನಿಯಂತ್ರಣವನ್ನು ಇನ್ನಷ್ಟು ಬಲಪಡಿಸಲು ತನ್ನ ಸಂವಿಧಾನದಲ್ಲಿ ಬದಲಾವಣೆ ಮಾಡಿದೆ. ಈಗ ಸರ್ಕಾರ, ಮಿಲಿಟರಿ, ರಾಜ್ಯ ಸಂಸ್ಥೆಗಳ ಮುಖ್ಯಸ್ಥರಾಗಿ ಎಲ್ಲವನ್ನೂ ನೋಡಿಕೊಳ್ಳುತ್ತಿದ್ದಾರೆ.

Leave a Reply

Your email address will not be published.