ಪುದೀನಾ ಸಾಮಾನ್ಯವಾಗಿ ಸೂರ್ಯನ ಬೆಳಕನ್ನು ಇಷ್ಟಪಡುವ ಗಿಡ. ಆದರೆ ಬೇಸಿಗೆಯ ತೀವ್ರ ಬಿಸಿಲು ಇದಕ್ಕೆ ಮಾರಕವಾಗಬಹುದು. ಸರಿಯಾದ ಗೊಬ್ಬರ, ನೀರು ಮತ್ತು ಬಿಸಿಲಿನ ನಿರ್ವಹಣೆ ಮಾಡಿದರೆ ನಿಮ್ಮ ಮನೆಯ ಪುದೀನಾ ಗಿಡವು ವರ್ಷಪೂರ್ತಿ ತಾಜಾ ಎಲೆಗಳನ್ನು ನೀಡುತ್ತದೆ.
ಮೇ ಮತ್ತು ಜೂನ್ ತಿಂಗಳಲ್ಲಿ ತಾಪಮಾನ ೪೦-೪೫ ಡಿಗ್ರಿ ತಲುಪಿದಾಗ, ಪುದೀನಾ ಗಿಡವನ್ನು ದಿನವಿಡೀ ಬಿಸಿಲಿನಲ್ಲಿ ಬಿಡಬೇಡಿ. ಬೆಳಗಿನ ೩-೪ ಗಂಟೆಗಳ ಕಾಲ ಮಾತ್ರ ಹಗುರವಾದ ಬಿಸಿಲು ತಗುಲುವಂತೆ ನೋಡಿಕೊಳ್ಳಿ. ಅತಿಯಾದ ಬಿಸಿಲು ಎಲೆಗಳನ್ನು ಸುಡುತ್ತದೆ ಮತ್ತು ಅವುಗಳ ಸುವಾಸನೆಯನ್ನು ಕಡಿಮೆ ಮಾಡುತ್ತದೆ. ಪಾಟ್: ನಿಮ್ಮ ಪುದೀನಾ ಪಾಟ್‌ನಲ್ಲಿದ್ದರೆ ಬಿಸಿಲು ಹೆಚ್ಚಾದಾಗ ಅದನ್ನು ಬಾಲ್ಕನಿ ಅಥವಾ ಕಿಟಕಿಯ ಹತ್ತಿರ ತಂಪಾದ ಜಾಗಕ್ಕೆ ಶಿಫ್ಟ್ ಮಾಡಿ.
ಟೆರೇಸ್ ಗಾರ್ಡನ್: ಒಂದು ವೇಳೆ ನೀವು ಟೆರೇಸ್ ಗಾರ್ಡನ್ ಮಾಡುತ್ತಿದ್ದರೆ ಗಿಡದ ಮೇಲೆ ‘ಗ್ರೀನ್ ನೆಟ್’ಹಾಕುವುದರಿಂದ ಬಿಸಿಲಿನ ತಾಪವನ್ನು ೫೦% ಕಡಿಮೆ ಮಾಡಬಹುದು.
ಪುದೀನಾ ವೇಗವಾಗಿ ಬೆಳೆಯಲು ಮಣ್ಣು ಸಡಿಲವಾಗಿರಬೇಕು. ಕುಂಡದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ. ಅಂತಹ ಮಣ್ಣಿನಲ್ಲಿ ಬೇರುಗಳು ಸುಲಭವಾಗಿ ಹರಡಿ ಗಿಡವು ಶೀಘ್ರವಾಗಿ ಬೆಳೆಯುತ್ತದೆ. ನಿಮ್ಮ ಪುದೀನಾ ಗಿಡವು ಪೊದೆಯಂತೆ ದಟ್ಟವಾಗಿ ಬೆಳೆಯಬೇಕೆಂದರೆ, ಪ್ರತಿ ೧೫ ದಿನಕ್ಕೊಮ್ಮೆ ಎಲೆಗಳ ಹತ್ತಿರವಿರುವ ಕಾಂಡದ ತುದಿಯನ್ನು ಸ್ವಲ್ಪ ಚಿವುಟುತ್ತಿರಿ. ಇದರಿಂದ ಹೊಸ ಕೊಂಬೆಗಳು ಚಿಗುರಿ, ಗಿಡವು ಹೆಚ್ಚು ಎಲೆಗಳಿಂದ ತುಂಬಿಕೊಳ್ಳುತ್ತದೆ.
ಪುದೀನಾ ಎಲೆಗಳನ್ನು ನಾವು ನೇರವಾಗಿ ಆಹಾರದಲ್ಲಿ ಬಳಸುವುದರಿಂದ ಯಾವುದೇ ಕಾರಣಕ್ಕೂ ಕೆಮಿಕಲ್ ಗೊಬ್ಬರಗಳನ್ನು ಬಳಸಬೇಡಿ. ಯಾವಾಗಲೂ ಸಾವಯವ ಗೊಬ್ಬರವನ್ನೇ ನೀಡಿ. ಪುದೀನಾ ಗಿಡಕ್ಕೆ ಯಾವಾಗಲೂ ‘ಸಂಜೆ’ ಅಥವಾ ‘ಬೆಳಗಿನ ಜಾವ’ ನೀರು ಹಾಕಿ. ಮಧ್ಯಾಹ್ನದ ಬಿಸಿಲಿನಲ್ಲಿ ನೀರು ಹಾಕುವುದರಿಂದ ಮಣ್ಣಿನ ಉಷ್ಣತೆ ಹೆಚ್ಚಾಗಿ ಬೇರುಗಳು ಹಾಳಾಗುವ ಸಂಭವವಿರುತ್ತದೆ.

Leave a Reply