ನವದೆಹಲಿಯ ಭಾರತ ಮಂಟಪದಲ್ಲಿ ನಡೆಯುತ್ತಿರುವ ಎ.ಐ ಇಂಪ್ಯಾಕ್ಟ್ ಶೃಂಗದಲ್ಲಿ ಉದ್ಯಮಿ ಮುಕೇಶ್ ಅಂಬಾನಿ ಮಹತ್ವದ ಘೋಷಣೆ ಮಾಡಿದ್ದಾರೆ. ಕೃತಕ ಬುದ್ಧಿಮತ್ತೆ (Ai) ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತರಲು ರಿಲಯನ್ಸ್ ಜಿಯೊ ಮುಂದಿನ ಏಳು ವರ್ಷಗಳಲ್ಲಿ ₹೧೦ ಲಕ್ಷ ಕೋಟಿ ಹೂಡಿಕೆ ಮಾಡುವುದಾಗಿ ಅವರು ತಿಳಿಸಿದ್ದಾರೆ.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಂಬಾನಿ, “ಎ.ಐಯ ಅತ್ಯುತ್ತಮ ಹಂತ ಇನ್ನಷ್ಟೇ ಬರಬೇಕಿದೆ. ಇದು ಸೂಪರ್ ಸಮೃದ್ಧಿಯ ಜಗತ್ತನ್ನು ತೆರೆದುಕೊಳ್ಳಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮೊಬೈಲ್ ದತ್ತಾಂಶ ಕ್ಷೇತ್ರದಲ್ಲಿ ಜಿಯೊ ಮಾಡಿದ ಕ್ರಾಂತಿಯAತೆ, Ai ಕ್ಷೇತ್ರದಲ್ಲಿಯೂ ಅದೇ ಮಾದರಿಯ ಬದಲಾವಣೆ ತರಲಾಗುತ್ತದೆ ಎಂದು ಅವರು ಹೇಳಿದರು.
ಕೈಗೆಟುಕುವ Ai – ಭಾರತದ ದೃಷ್ಟಿಕೋನ : AI ಕ್ಷೇತ್ರದಲ್ಲಿ ಜಗತ್ತು ಎರಡು ದಿಕ್ಕುಗಳಲ್ಲಿ ಸಾಗುತ್ತಿದೆ. ಒಂದು ದುಬಾರಿ ಹಾಗೂ ನಿಯಂತ್ರಿತ ದತ್ತಾಂಶ ಆಧಾರಿತ AI, ಇನ್ನೊಂದು ಸಾಮಾನ್ಯ ಜನತೆಗೆ ಕೈಗೆಟುಕುವ Ai. ಭಾರತ ಕೈಗೆಟುಕುವ, ಸಮಾನ ಅವಕಾಶಗಳನ್ನು ಒದಗಿಸುವ Ai ಮಾದರಿಯನ್ನು ಅಭಿವೃದ್ಧಿಪಡಿಸಲಿದೆ ಎಂದು ಅಂಬಾನಿ ತಿಳಿಸಿದರು.
“ಈ ₹೧೦ ಲಕ್ಷ ಕೋಟಿ ಹೂಡಿಕೆ ಊಹಾತ್ಮಕವಲ್ಲ. ಇದು ತಾಳ್ಮೆಯ, ಶಿಸ್ತುಬದ್ಧ ಮತ್ತು ರಾಷ್ಟ್ರ ನಿರ್ಮಾಣದ ಬಂಡವಾಳ” ಎಂದು ಅವರು ಹೇಳಿದರು. ಈ ಹೂಡಿಕೆ ದೇಶದ ಡಿಜಿಟಲ್ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸುವುದರೊಂದಿಗೆ, ಸ್ಟಾರ್ಟ್ಅಪ್ಗಳು, ಉದ್ಯಮಗಳು ಮತ್ತು ಯುವ ಪ್ರತಿಭೆಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ ಎಂದು ವಿವರಿಸಿದರು.
ಜಿಯೊ ಇಂಟೆಲಿಜೆನ್ಸ್ – ಸಾರ್ವಭೌಮ ಕಂಪ್ಯೂಟ್ ಮೂಲಸೌಕರ್ಯ: “ಎ.ಐಯಲ್ಲಿ ಪ್ರತಿಭೆಗಳಿಗೆ ಭಾರತದಲ್ಲಿ ಕೊರತೆಯಿಲ್ಲ. ‘ಜಿಯೊ ಇಂಟೆಲಿಜೆನ್ಸ್’ ಮೂಲಕ ಭಾರತದ ಸಾರ್ವಭೌಮ ಕಂಪ್ಯೂಟ್ ಮೂಲಸೌಕರ್ಯವನ್ನು ನಿರ್ಮಿಸಲಾಗುತ್ತದೆ” ಎಂದು ಭರವಸೆ ನೀಡಿದರು. ಇದು ದೇಶೀಯ Ai ಸಂಶೋಧನೆ, ಡೇಟಾ ಪ್ರೊಸೆಸಿಂಗ್ ಮತ್ತು ಕ್ಲೌಡ್ ಸಾಮರ್ಥ್ಯವನ್ನು ವಿಸ್ತರಿಸುವತ್ತ ಮಹತ್ವದ ಹೆಜ್ಜೆಯಾಗಲಿದೆ.
ಜಾಗತಿಕ ಮಟ್ಟದಲ್ಲಿ Ai ಕ್ಷೇತ್ರದಲ್ಲಿ ಭಾರತವನ್ನು ಮುಂಚೂಣಿಗೆ ತರುವ ಗುರಿಯೊಂದಿಗೆ ಈ ಹೂಡಿಕೆ ಘೋಷಣೆ ಮಾಡಲಾಗಿದೆ ಎಂದು ಅವರು ಹೇಳಿದರು. ಶೃಂಗಸಭೆಯಲ್ಲಿ ವಿವಿಧ ದೇಶಗಳ ತಂತ್ರಜ್ಞಾನ ತಜ್ಞರು, ನೀತಿನಿರ್ಧಾರಕರು ಮತ್ತು ಉದ್ಯಮಿಗಳು ಭಾಗವಹಿಸಿದ್ದಾರೆ.

Leave a Reply