ಕ್ಯಾಲೆಂಡರ್ಗಳು ಕೇವಲ ದಿನಾಂಕ ಪಟ್ಟಿಗಳಲ್ಲ; ಅವು ಧರ್ಮ, ನಂಬಿಕೆಗಳು, ಹಬ್ಬಗಳು ಮತ್ತು ಸೂರ್ಯ-ಚಂದ್ರರ ಚಲನೆಯನ್ನು ಆಧರಿಸಿದ ವಿಜ್ಞಾನದ ಪ್ರತಿಬಿಂಬಗಳಾಗಿವೆ. ಜಗತ್ತಿನ ೪೦ಕ್ಕೂ ಹೆಚ್ಚು ಕ್ಯಾಲೆಂಡರ್ಗಳಲ್ಲಿ ೧೧ ಪ್ರಮುಖವಾಗಿವೆ. ಹಿಂದೂ ಪಂಚಾoಗ, ಗ್ರೆಗೋರಿಯನ್, ಹಿಜ್ರಿ, ಚೈನೀಸ್, ಹೀಬ್ರೂ ಮತ್ತು ಬೌದ್ಧ ಕ್ಯಾಲೆಂಡರ್ಗಳು ವಿಭಿನ್ನವಾಗಿ ಕಾಲವನ್ನು ಅಳೆಯುವ ವಿಧಾನಗಳನ್ನು ಹೊಂದಿದೆ.
ಕ್ಯಾಲೆಂಡರ್ಗಳು ಕೇವಲ ದಿನ, ತಿಂಗಳು ಮತ್ತು ವರ್ಷವನ್ನು ತಿಳಿಸುವ ಸಾಧನಗಳಲ್ಲ; ಅವು ಆಯಾ ಧರ್ಮದ ನಂಬಿಕೆಗಳು, ಹಬ್ಬಗಳು, ಶುಭ-ಅಶುಭ ಮುಹೂರ್ತಗಳು ಮತ್ತು ಸೂರ್ಯ-ಚಂದ್ರರ ಚಲನೆಯನ್ನು ಆಧರಿಸಿದ ವಿಜ್ಞಾನದ ಪ್ರತಿಬಿಂಬಗಳಾಗಿವೆ. ಜಗತ್ತಿನಾದ್ಯಂತ ಸುಮಾರು ೪೦ಕ್ಕೂ ಹೆಚ್ಚು ವಿಭಿನ್ನ ಕ್ಯಾಲೆಂಡರ್ಗಳು ಬಳಕೆಯಲ್ಲಿದ್ದರೂ, ಅವುಗಳಲ್ಲಿ ೧೧ ಕ್ಯಾಲೆಂಡರ್ಗಳು ಹೆಚ್ಚು ಪ್ರಸಿದ್ಧವಾಗಿವೆ.
ಹಿಂದೂ ಪಂಚಾಂಗ: ಭಾರತೀಯ ಸಂಸ್ಕೃತಿಯಲ್ಲಿ ‘ಹಿಂದೂ ಪಂಚಾAಗ’ಕ್ಕೆ ಅತ್ಯಂತ ಮಹತ್ವದ ಸ್ಥಾನವಿದೆ. ಸೌರ ಮತ್ತು ಚಂದ್ರ ಚಕ್ರಗಳೆರಡನ್ನೂ ಆಧರಿಸಿದ ಈ ಪಂಚಾಂಗವು ಸಮಯವನ್ನು ಅಳೆಯುವ ಅದ್ಭುತ ಸಾಧನವಾಗಿದೆ. ಇದರಲ್ಲಿ ಒಂದು ತಿಂಗಳನ್ನು ಶುಕ್ಲ ಪಕ್ಷ ಮತ್ತು ಕೃಷ್ಣ ಪಕ್ಷ ಎಂದು ಎರಡು ಭಾಗಗಳಾಗಿ ವಿಂಗಡಿಸಲಾಗಿದ್ದು, ಒಟ್ಟು ೩೦ ತಿಥಿಗಳಿವೆ. ಭಾರತ ಮತ್ತು ನೇಪಾಳದ ಸಂಪ್ರದಾಯಗಳಿಗೆ ಈ ಪಂಚಾಂಗವೇ ಅಡಿಪಾಯ.
ಗ್ರೆಗೋರಿಯನ್ ಕ್ಯಾಲೆಂಡರ್: ಇಂದು ಜಗತ್ತಿನಾದ್ಯಂತ ಆಡಳಿತಾತ್ಮಕವಾಗಿ ಹೆಚ್ಚು ಬಳಕೆಯಲ್ಲಿರುವುದು ‘ಗ್ರೆಗೋರಿಯನ್ ಕ್ಯಾಲೆಂಡರ್’. ೧೫೮೨ ರಲ್ಲಿ ಪೋಪ್ ಗ್ರೆಗೊರಿ ಘಿIII ರಿಂದ ಜಾರಿಗೆ ಬಂದ ಈ ಪದ್ಧತಿಯು ಸಂಪೂರ್ಣವಾಗಿ ಸೌರ ಚಕ್ರವನ್ನು ಆಧರಿಸಿದೆ. ಇದು ಸಾಮಾನ್ಯ ವರ್ಷದಲ್ಲಿ ೩೬೫ ದಿನಗಳನ್ನು ಮತ್ತು ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಬರುವ ‘ಅಧಿಕ ವರ್ಷ’ದಲ್ಲಿ ೩೬೬ ದಿನಗಳನ್ನು ಹೊಂದಿರುತ್ತದೆ.
ಹಿಜ್ರಿ ಕ್ಯಾಲೆಂಡರ್: ಧಾರ್ಮಿಕ ಆಚರಣೆಗಳ ವಿಷಯಕ್ಕೆ ಬಂದರೆ ಇಸ್ಲಾಂ ಧರ್ಮದಲ್ಲಿ ‘ಹಿಜ್ರಿ ಕ್ಯಾಲೆಂಡರ್’ ಅತ್ಯಂತ ಪ್ರಮುಖವಾದುದು. ಇದು ಚಂದ್ರನ ಚಲನೆಯನ್ನು ಮಾತ್ರ ಅವಲಂಬಿಸಿರುವ ಕ್ಯಾಲೆಂಡರ್ ಆಗಿದ್ದು, ಒಂದು ವರ್ಷದಲ್ಲಿ ೩೫೪ ದಿನಗಳಿರುತ್ತವೆ. ರಂಜಾನ್ ಮತ್ತು ಹಜ್ ನಂತಹ ಪವಿತ್ರ ದಿನಗಳನ್ನು ನಿರ್ಧರಿಸಲು ಈ ಪದ್ಧತಿಯನ್ನೇ ಬಳಸಲಾಗುತ್ತದೆ.
ಚೈನೀಸ್ ಕ್ಯಾಲೆಂಡರ್: ಚೈನೀಸ್ ಕ್ಯಾಲೆಂಡರ್ ಚಂದ್ರ ಮತ್ತು ಸೂರ್ಯ ಎರಡನ್ನೂ ಅನುಸರಿಸುತ್ತದೆ. ಇದರ ವಿಶೇಷವೆಂದರೆ, ಇಲ್ಲಿ ಪ್ರತಿ ವರ್ಷಕ್ಕೂ ೧೨ ವಿವಿಧ ಪ್ರಾಣಿಗಳ ಹೆಸರನ್ನು ಇಡಲಾಗುತ್ತದೆ, ಇದು ಚೀನಾದ ಜ್ಯೋತಿಷ್ಯ ಶಾಸ್ತ್ರದೊಂದಿಗೆ ನಿಕಟ ಸಂಬಂಧ ಹೊಂದಿದೆ.
ಜಗತ್ತಿನ ಇತರ ಭಾಗಗಳಲ್ಲಿಯೂ ಇಂತಹ ಆಸಕ್ತಿದಾಯಕ ಪದ್ಧತಿಗಳನ್ನು ಕಾಣಬಹುದು. ಜೂಡಿಯಿಸಂ ಧರ್ಮದವರು ಅನುಸರಿಸುವ ‘ಹೀಬ್ರೂ ಕ್ಯಾಲೆಂಡರ್’ ಚಂದ್ರಸೌರ ವ್ಯೂಹವನ್ನು ಆಧರಿಸಿದ್ದು, ಒಂದು ವರ್ಷದಲ್ಲಿ ೩೫೪ ರಿಂದ ೩೮೫ ದಿನಗಳವರೆಗೆ ವ್ಯತ್ಯಾಸವಿರುತ್ತದೆ. ಆಗ್ನೇಯ ಏಷ್ಯಾದ ರಾಷ್ಟ್ರಗಳಲ್ಲಿ ಪ್ರಚಲಿತದಲ್ಲಿರುವ ‘ಬೌದ್ಧ ಕ್ಯಾಲೆಂಡರ್’ ಮೂಲತಃ ಹಿಂದೂ ಪಂಚಾಂಗದ ಲೆಕ್ಕಾಚಾರಗಳನ್ನೇ ಹೋಲುತ್ತದೆ.
ಈ ಎಲ್ಲಾ ಕ್ಯಾಲೆಂಡರ್ಗಳು ಮಾನವನು ಪ್ರಕೃತಿಯ ಚಲನೆಯನ್ನು ಅರ್ಥೈಸಿಕೊಳ್ಳಲು ಮತ್ತು ತನ್ನ ಜೀವನವನ್ನು ಕ್ರಮಬದ್ಧವಾಗಿ ರೂಪಿಸಿಕೊಳ್ಳಲು ಸೃಷ್ಟಿಸಿಕೊಂಡ ಅಮೂಲ್ಯವಾದ ವ್ಯವಸ್ಥೆಗಳಾಗಿವೆ.

Leave a Reply