ಸಂಘರ್ಷದ ಎಫೆಕ್ಟ್; ರಸಗೊಬ್ಬರಗಳ ಬೆಲೆ ಗಗನಕ್ಕೆ ಏರುವ ಸಾಧ್ಯತೆ
ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆಯಿಂದಾಗಿ ಯೂರಿಯಾ ರಫ್ತು ಬೆಲೆಗಳು ಕಳೆದ ಶುಕ್ರವಾರ ಮೆಟ್ರಿಕ್ ಟನ್ಗೆ ಸುಮಾರು 40% ರಷ್ಟು ಏರಿಕೆಯಾಗಿವೆ. ಪ್ರಸ್ತುತ ಬೆಲೆಯು 700 ಡಾಲರ್ಗಿಂತ (ಅಂದಾಜು 58,000 ದಿಂದ 65,000 ರೂಪಾಯಿ) ಹೆಚ್ಚಾಗಿದೆ. ಯುದ್ಧ ಆರಂಭವಾಗುವ ಮೊದಲು ಇದು 500 ಡಾಲರ್ಗಿಂತ ಕಡಿಮೆ ಇತ್ತು. ಇರಾನ್ ವಲಯದಲ್ಲಿ ಸಂಘರ್ಷ ಪ್ರಾರಂಭವಾದಾಗಿನಿಂದ ಒಟ್ಟಾರೆ ರಸಗೊಬ್ಬರಗಳ ಬೆಲೆ 32% ರಷ್ಟು ಹೆಚ್ಚಾಗಿದೆ.
ಯುದ್ಧ ಮುಂದುವರಿದರೆ ಯೂರಿಯಾದಂತಹ ಸಾರಜನಕ ಆಧಾರಿತ ರಸಗೊಬ್ಬರಗಳ ಬೆಲೆಗಳು ದ್ವಿಗುಣಗೊಳ್ಳಬಹುದು ಎಂದು ವಿಶ್ಲೇಷಕರು ಎಚ್ಚರಿಸಿದ್ದಾರೆ. “ಮಧ್ಯಪ್ರಾಚ್ಯವು ಮಾರುಕಟ್ಟೆಯಲ್ಲಿ ಹೊಂದಿರುವ ಪ್ರಬಲ ಪಾಲನ್ನು ಗಮನಿಸಿದರೆ, ಅಲ್ಲಿನ ಪೂರೈಕೆಯಲ್ಲಿ ಉಂಟಾಗುವ ನಷ್ಟವನ್ನು ಯಾವುದೇ ಉತ್ಪಾದಕರು ತ್ವರಿತವಾಗಿ ಸರಿದೂಗಿಸಲು ಸಾಧ್ಯವಿಲ್ಲ” ಎಂದು ಆರ್ಥಿಕ ವಿಶ್ಲೇಷಕ ಕ್ರಿಸ್ ಲಾಸನ್ ಹೇಳಿದ್ದಾರೆ. ವಿಶ್ವದ ಅತಿದೊಡ್ಡ ರಸಗೊಬ್ಬರ ರಫ್ತುದಾರ ರಾಷ್ಟ್ರವಾದ ರಷ್ಯಾವು ಉಕ್ರೇನ್ನ ಡ್ರೋನ್ ದಾಳಿಯಿಂದಾಗಿ ಪೂರೈಕೆಯಲ್ಲಿ ಅಡಚಣೆಗಳನ್ನು ಎದುರಿಸುತ್ತಿದೆ. ಇನ್ನೊಂದೆಡೆ ಚೀನಾವು ಸಾಕಷ್ಟು ಉತ್ಪಾದನಾ ಸಾಮರ್ಥ್ಯ ಹೊಂದಿದ್ದರೂ ಸಹ ರಫ್ತುಗಳ ಮೇಲೆ ನಿರ್ಬಂಧ ಹೇರುತ್ತಿದೆ. ಈ ಎಲ್ಲಾ ಕಾರಣಗಳಿಂದಾಗಿ ರಸಗೊಬ್ಬರಗಳ ಬೆಲೆ ಏರುತ್ತಿದೆ.
ಮಧ್ಯಪ್ರಾಚ್ಯ ಸಂಘರ್ಷವು ರಸಗೊಬ್ಬರ ವ್ಯಾಪಾರವನ್ನು ಅಸ್ತವ್ಯಸ್ತಗೊಳಿಸುತ್ತಿದ್ದು, ಭಾರತದ ಕೃಷಿ ವಲಯಕ್ಕೆ ಸಂಕಷ್ಟ ತಂದೊಡ್ಡುವ ಸಾಧ್ಯತೆಯಿದೆ. ಭಾರತವು ವಿಶ್ವದ ಎರಡನೇ ಅತಿದೊಡ್ಡ ರಸಗೊಬ್ಬರ ಬಳಕೆದಾರ ರಾಷ್ಟ್ರವಾಗಿದೆ. ಯುದ್ಧ ಹೀಗೆಯೇ ಮುಂದುವರಿದರೆ, ಮುಂಬರುವ ಬೇಸಿಗೆ ಬಿತ್ತನೆ ಋತುವಿನಲ್ಲಿ ಉತ್ಪಾದನಾ ವೆಚ್ಚ (Input cost) ಹೆಚ್ಚಾಗುವುದರಿಂದ ರೈತರು ಅದರ ನೇರ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ. ಮುಂಬರುವ ದಿನಗಳಲ್ಲಿ ರಸಗೊಬ್ಬರಗಳ ಕೊರತೆಯು ಕೇವಲ ಇಳುವರಿಗೆ ಮಾತ್ರವಲ್ಲದೆ, ರೈತರ ಜೀವನೋಪಾಯಕ್ಕೂ ಅಪಾಯವನ್ನುಂಟು ಮಾಡಬಹುದು. ಇಸ್ರೇಲ್-ಇರಾನ್ ಸಂಘರ್ಷವು ಪೂರೈಕೆಗೆ ಅಡ್ಡಿಪಡಿಸಿರುವುದರಿಂದ, ಭಾರತದಂತಹ ಆಮದುದಾರ ರಾಷ್ಟ್ರಗಳಿಗೆ ವೆಚ್ಚದ ಹೊರೆ ಹೆಚ್ಚಾಗಿದೆ.
ಭಾರತದ ಆಹಾರ ಭದ್ರತೆಯು ಪಶ್ಚಿಮ ಏಷ್ಯಾದ ರಸಗೊಬ್ಬರ ಪೂರೈಕೆಯ ಮೇಲೆ ಹೆಚ್ಚು ಅವಲಂಬಿತವಾಗಿದೆ. ಹೀಗಾಗಿ ಆ ಪ್ರದೇಶದ ಅಸ್ಥಿರತೆಯು ಭಾರತದ ಮೇಲೆ ನೇರ ಪ್ರಭಾವ ಬೀರುತ್ತದೆ. ಉಲ್ಬಣಗೊಳ್ಳುತ್ತಿರುವ ಈ ಸಂಘರ್ಷಕ್ಕೆ ಸದ್ಯಕ್ಕೆ ಅಂತ್ಯ ಕಾಣದ ಕಾರಣ, ರಸಗೊಬ್ಬರ ಬಿಕ್ಕಟ್ಟು ಇನ್ನಷ್ಟು ಹೆಚ್ಚಾಗುವ ಲಕ್ಷಣಗಳಿವೆ.
ಪ್ರಸ್ತುತ ಭಾರತದಲ್ಲಿ ರಸಗೊಬ್ಬರ ದಾಸ್ತಾನು ಸಾಕಷ್ಟಿದೆ. ಆದರೆ ಇನ್ನು ಕೆಲವು ವಾರಗಳಲ್ಲಿ ಬೇಸಿಗೆ ಬಿತ್ತನೆ ಋತು ಆರಂಭವಾಗಲಿದ್ದು, ಬೇಡಿಕೆ ಮತ್ತಷ್ಟು ಹೆಚ್ಚಾಗಲಿದೆ. “ಯುದ್ಧ ಮುಂದುವರಿದರೆ ಪರ್ಯಾಯ ಪರಿಹಾರಗಳನ್ನು ಕಂಡುಕೊಳ್ಳಲು ಸರ್ಕಾರದ ಬಳಿ ಸಮಯ ಬಹಳ ಕಡಿಮೆ ಇದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಕೃಷಿ ತಜ್ಞರು, ಭಾರತ ಸರ್ಕಾರವು ಈಗಲೇ ಎಚ್ಚೆತ್ತುಕೊಂಡು ಪರಿಹಾರಗಳನ್ನು ಹುಡುಕಬೇಕಿದೆ ಎಂದಿದ್ದಾರೆ. ತಕ್ಷಣವೇ ಒಂದು ಉನ್ನತ ಮಟ್ಟದ ಸಮಿತಿಯನ್ನು ರಚಿಸಿ, ವಿದೇಶಿ ಪೂರೈಕೆಯಲ್ಲಿ ವ್ಯತ್ಯಯವಾದರೆ ದೇಶದ ಸಂಪನ್ಮೂಲಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂಬ ಬಗ್ಗೆ ಸ್ಪಷ್ಟ ಯೋಜನೆ ರೂಪಿಸಬೇಕಾದ ಅಗತ್ಯವಿದೆ.

Leave a Reply