ಸಣ್ಣ ಹೂಡಿಕೆದಾರರು ಹೂಡಿಕೆ ಮಾಡುವ ಮ್ಯೂಚುವಲ್ ಫಂಡ್ ಸೇರಿದಂತೆ ಇತರ ಹೂಡಿಕೆ ಸಾಧನಗಳಲ್ಲಿ ಸೆಬಿ ಆಗಾಗ ಬದಲಾವಣೆ ಮಾಡುತ್ತದೆ. ಏಕೆಂದರೆ ಹೂಡಿಕೆದಾರರ ಬಂಡವಾಳ ರಕ್ಷಣೆ ಸೆಬಿಯ ಮುಖ್ಯ ಉದ್ದೇಶ. ಅಂತೆಯೇ ಇತ್ತೀಚೆಗೆ ಸೆಬಿ, “ಲೈಫ್ ಸೈಕಲ್ ಫಂಡ್” ಎಂದು ಕರೆಯಲ್ಪಡುವ ಹೊಸ ಮ್ಯೂಚುಯಲ್ ಫಂಡ್ಗಳನ್ನು ಪರಿಚಯಿಸಿದೆ. ಏನಿದು ಲೈಫ್ ಸೈಕಲ್ ಫಂಡ್? ಹೂಡಿಕೆದಾರರಿಗೆ ಎಷ್ಟರ ಮಟ್ಟಿಗೆ ಪ್ರಯೋಜನ ಎಂಬುದನ್ನು ನೋಡಬೇಕಿದೆ.
ಸಾಂಪ್ರದಾಯಿಕ ಮ್ಯೂಚುವಲ್ ಫಂಡ್ಗಳಿಗೆ ಹೋಲಿಸಿದರೆ, ಲೈಫ್ ಸೈಕಲ್ ಫಂಡ್ಗಳು ಒಂದು ವಿಶಿಷ್ಟ ವಿಧಾನವನ್ನು ಅಳವಡಿಸಿಕೊಳ್ಳುತ್ತವೆ. ಮೂಲಭೂತವಾಗಿ, ಇವು ಓಪನ್ ಎಂಡೆಡ್ ಟಾರ್ಗೆಟ್ ಡೇಟ್ ಫಂಡ್ಗಳು. ಅಂದರೆ ಇವು ಪೂರ್ವನಿರ್ಧರಿತ ಮ್ಯಾಚುರಿಟಿ ದಿನಾಂಕದೊಂದಿಗೆ ಸಂಬಂಧ ಹೊಂದಿವೆ ಎಂದು ಸೂಚಿಸುತ್ತದೆ. ಈ ಫಂಡ್ ಸಾಮಾನ್ಯವಾಗಿ ೫ ವರ್ಷಗಳ ಅವಧಿಯನ್ನು ಹೊಂದಿರುತ್ತವೆ, ಆದರೂ ಕೆಲವು ಗರಿಷ್ಠ ೩೦ ವರ್ಷಗಳ ಅವಧಿಯವರೆಗೆ ವಿಸ್ತರಿಸಬಹುದು. ಮೆಚ್ಯುರಿಟಿ ದಿನಾಂಕ ಸಮೀಪಿಸುತ್ತಿದ್ದಂತೆ, ಸ್ವಯಂಚಾಲಿತವಾಗಿ ಫಂಡ್ ತನ್ನ ಹೂಡಿಕೆ ತಂತ್ರವನ್ನು ಬದಲಿಸುತ್ತದೆ. ಅಂದರೆ “ಗ್ಲೈಡ್ ಪಾತ್” ಎಂದು ಕರೆಯಲ್ಪಡುವ ಪೂರ್ವನಿರ್ಧರಿತ ಹೂಡಿಕೆ ಮಾರ್ಗವನ್ನು ಇದು ಅನುಸರಿಸುತ್ತದೆ. ಕ್ರಮೇಣ ಈಕ್ವಿಟಿ ಹೂಡಿಕೆಗಳಿಂದ ಸುರಕ್ಷಿತ ಹೂಡಿಕೆಗಳಿಗೆ ಬದಲಾಯಿಸುತ್ತದೆ.
ಈ ವಿಧಾನವು ಸಾಂಪ್ರದಾಯಿಕ “ಸೆಲ್ಯೂಷನ್ ಓರಿಯೆಂಟೆಡ್ ಫಂಡ್ಗಳಿಗೆ” ಸಂಪೂರ್ಣವಾಗಿ ವ್ಯತಿರಿಕ್ತವಾಗಿದ್ದು, ಸ್ಥಿರ ಆಸ್ತಿ ಹಂಚಿಕೆ ತಂತ್ರಗಳಿಗೆ ಬದ್ಧವಾಗಿದೆ. ಲೈಫ್ ಸೈಕಲ್ ಫಂಡ್ಗಳು, ಹೂಡಿಕೆದಾರರು ತಮ್ಮ ನಿರ್ದಿಷ್ಟ ಸಮಯಬದ್ಧ ಹಣಕಾಸು ಗುರಿಗಳನ್ನು ಸಾಧಿಸಲು ಸಹಾಯ ಮಾಡಲು ವಿನ್ಯಾಸಗೊಳಿಸಲಾಗಿದೆ. ಅಪಾಯ ತಗ್ಗಿಸಲು ಮಾರುಕಟ್ಟೆ ಕುಸಿತವಾದಾಗ ಹೂಡಿಕೆದಾರರು ತೆಗೆದುಕೊಳ್ಳಬಹುದಾದ ನಿರ್ಧಾರಗಳ ಪರಿಣಾಮವನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತವೆ.
ಆರ್ಥಿಕ ಶಿಸ್ತನ್ನು ಉತ್ತೇಜಿಸಲು, ಮೊದಲ ವರ್ಷದೊಳಗೆ ಹೂಡಿಕೆ ಹಿಂಪಡೆದರೆ ಶೇ.೩ ರಷ್ಟು ಶುಲ್ಕ ವಿಧಿಸಲಾಗುತ್ತದೆ. ಎರಡು ವರ್ಷದೊಳಗೆ ಹಿಂಪಡೆದರೆ ಶೇ.೨, ಮೂರು ವರ್ಷದೊಳಗೆ ಹಿಂಪಡೆದರೆ ಶೇ.೧ರಷ್ಟು ನಿರ್ಗಮನ ಲೋಡ್ ಅನ್ವಯವಾಗಲಿದೆ.
ಹೂಡಿಕೆಗಳನ್ನು ಬದಲಾಯಿಸುವುದರಿಂದ ಸಾಮಾನ್ಯವಾಗಿ ಉದ್ಭವಿಸುವ ತೆರಿಗೆ ಸಂಬAಧಿತ ಸಮಸ್ಯೆಗಳನ್ನು ಸಹ ಈ ಫಂಡ್ಗಳು ಪರಿಹರಿಸುತ್ತವೆ. ಸಾಮಾನ್ಯವಾಗಿ, ಹೂಡಿಕೆದಾರರು ಸ್ವತಂತ್ರವಾಗಿ ಒಂದು ಫಂಡ್ನಿಂದ (ಉದಾಹರಣೆ ಇಕ್ವಿಟಿ) Equity ಇನ್ನೊಂದಕ್ಕೆ (ಉದಾಹರಣೆ, ಸಾಲ) ಬದಲಾಯಿಸಿದರೆ, ಅವರು ಲಾಭಗಳ ಮೇಲೆ ತೆರಿಗೆ ಪಾವತಿಸಬೇಕಾಗುತ್ತದೆ. ಆದರೆ ಲೈಫ್ ಸೈಕಲ್ ಫಂಡ್ಗಳಲ್ಲಿ, ಹೂಡಿಕೆಗಳ ಮರುಹಂಚಿಕೆಯು ಆಂತರಿಕವಾಗಿ ಸಂಭವಿಸುತ್ತದೆ. ಇದರಿಂದ ಯಾವುದೇ ತೆರಿಗೆ ಕಟ್ಟಬೇಕಿಲ್ಲ. ಮುಕ್ತಾಯದ ವೇಳೆ ಮಾತ್ರ ತೆರಿಗೆಗಳನ್ನು ಪಾವತಿಸಬೇಕಾಗುತ್ತದೆ. ೨೦ ರಿಂದ ೩೦ ವರ್ಷಗಳ ದೀರ್ಘಾವಧಿಯಲ್ಲಿ, ಯಾವುದೇ ತಕ್ಷಣದ ತೆರಿಗೆ ಹೊರೆ ಇಲ್ಲದೇ ಈ ಆಂತರಿಕ ಮರುಹಂಚಿಕೆಗಳು ನಿಮ್ಮ ಒಟ್ಟಾರೆ ಹೂಡಿಕೆ ಆದಾಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತವೆ.
ಅನಾನುಕೂಲಗಳೇನು?; ಈ ಫಂಡ್ಗಳು ವಿವಿಧ ಆಸ್ತಿ ವರ್ಗಗಳಲ್ಲಿ ಹೂಡಿಕೆಗಳನ್ನು ಹೇಗೆ ಹಂಚುತ್ತವೆ ಎಂಬುದರ ಕುರಿತು ಸಂಪೂರ್ಣ ವಿವೇಚನೆಯನ್ನು ಹೊಂದಿವೆ. ಅಂದರೆ ಈಕ್ವಿಟಿ ವಿಭಾಗದೊಳಗಿನ ಲಾರ್ಜ್ ಕ್ಯಾಪ್ ಸ್ಟಾಕ್ಗಳನ್ನು ಬೆಂಬಲಿಸಬೇಕೆ ಅಥವಾ ಹೂಡಿಕೆಗಳನ್ನು ಮಧ್ಯಮ ಮತ್ತು ಸ್ಮಾಲ್-ಕ್ಯಾಪ್ಗಳ ಕಡೆಗೆ ತಿರುಗಿಸಬೇಕೆ ಎಂಬುದು ಸಂಪೂರ್ಣವಾಗಿ ಫಂಡ್ ವ್ಯವಸ್ಥಾಪಕರ ವಿವೇಚನೆಗೆ ಬಿಟ್ಟದ್ದು. ಅಲ್ಲದೇ, ಸಾಲ ವಿಭಾಗದೊಳಗಿನ ಹೂಡಿಕೆಗಳ ಅವಧಿಗೆ ಸಂಬಂಧಿಸಿದಂತೆ ಯಾವುದೇ ಸ್ಪಷ್ಟ ನಿರ್ಬಂಧಗಳಿಲ್ಲ. ೨೦ ರಿಂದ ೩೦ ವರ್ಷಗಳ ಹೂಡಿಕೆ ಒಳಗೊಂಡಿರುವ ಯೋಜನೆಗಳಿಗೆ, ನಿರ್ದಿಷ್ಟ ನಿರ್ಬಂಧಗಳ ಕೊರತೆಯು ಕಳವಳಕ್ಕೆ ಕಾರಣವಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Leave a Reply