ಭೂಮಿ ರಕ್ಷಣೆ ನಮ್ಮ ಹೊಣೆ
ಹವಾಮಾನ ಏರಿಕೆಯ ಪರಿಣಾಮಗಳನ್ನು ದಿನದಿನವೂ ನೋಡುತ್ತಿದ್ದೇವೆ. ಎಲ್ಲರನ್ನೂ ಪೊರೆಯುವ ತಾಯಿ ಎನಿಸಿರುವ ಭೂಮಿ ಮುನಿಸಿಕೊಂಡಿದ್ದಾಳೆ. ಮಾನವ ಕುಲ ಭೂತಾಯಿಯನ್ನು ನಿರ್ದಾಕ್ಷಿಣ್ಯವಾಗಿ ಕಠಿಣವಾಗಿ ನಡೆಸಿಕೊಂಡ ಪರಿಣಾಮವೇ ಹವಾಮಾನ ಏರಿಕೆ.
ಭೂಗ್ರಹದ ವ್ಯವಸ್ಥೆಯಲ್ಲಿ ಚೂರೇ ಚೂರು ವ್ಯತ್ಯಾಸವಾದರೂ ಎಲ್ಲರೂ ಏರುಪೇರಾಗುತ್ತದೆ. ಭೂಮಿಯೆಂದರೆ ಬೇರೆಯಲ್ಲ, ಸಕಲ ನೈಸರ್ಗಿಕ ವ್ಯವಸ್ಥೆಗಳು ಬೇರೆಯಲ್ಲ. ಅವೆಲ್ಲ ಚೆನ್ನಾಗಿದ್ದರೆ ಮಾತ್ರ ಭೂಮಿ ಚೆನ್ನಾಗಿರುತ್ತದೆ. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಭೂಮಿಯನ್ನು ಇಂಚಿಂಚೂ ಕಬಳಿಸಿದ್ದಾನೆ. ಹೀಗಾಗಿ, ವರ್ಷದಿಂದ ವರ್ಷಕ್ಕೆ ತಾಪಮಾನ ಏರಿಕೆ ಆಗುತ್ತಲೇ ಇದೆ. ಭೂಮಿಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಎಲ್ಲರನ್ನೂ ಜಾಗ್ರತಗೊಳಿಸಲು ಪ್ರತಿವರ್ಷ ಏಪ್ರಿಲ್ ೨೨ರಂದು ಭೂ ದಿನವನ್ನು ಆಚರಿಸಲಾಗುತ್ತದೆ.
ಭೂಮಿಯನ್ನು ಸಹಜ ಸ್ಥಿತಿಗೆ ಮರಳಿಸುವುದು ಖಂಡಿತ ಮನುಷ್ಯನಿಂದಾಗ ಕೆಲಸ. ಆದರೆ, ಅದರ ಬಗ್ಗೆ ಪ್ರಯತ್ನವನ್ನಾದರೂ ಮಾಡಬಹುದು. ಇದೇ ವಿಶ್ವ ಭೂಮಿ ದಿನವನ್ನು ಆಚರಿಸುವ ಮುಖ್ಯ ಉದ್ದೇಶ. ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ, ಮಾಲಿನ್ಯ ಮತ್ತು ಜೀವವೈವಿಧ್ಯತೆಯ ನಾಶ ಇವೆಲ್ಲವುಗಳ ತಡೆಗೆ ನಮ್ಮಿಂದಾದ ಕೊಡುಗೆ ನೀಡಬೇಕು. ಭೂಮಿಯ ಕೋಟ್ಯಂತರ ಜನ ಸೇರಿ ಮನಸ್ಸು ಮಾಡಿದರೆ ಸಾಧ್ಯವಾಗದೆ ಇರುವಂಥದ್ದು ಏನಿದೆ?
೫೩ ವರ್ಷಗಳ ಮೊದಲು ವಿಶ್ವ ಭೂ ದಿನದ ಆಚರಣೆಗೆ ಶುಭಾರಂಭ ಮಾಡಲಾಯಿತು. ಅಮೆರಿಕದ ಸಿನೇಟರ್ ಜೆರಾಲ್ಡ್ ನೆಲ್ಸನ್ ಈ ದಿನಾಚರಣೆ ಹಿಂದಿನ ರೂವಾರಿ. ಶಾಲೆಗಳಿಗೆ ಪರೀಕ್ಷೆ ಇಲ್ಲದ ಈ ದಿನಗಳು ಅವರಿಗೆ ಭೂಮಿ ದಿನ ಆಚರಿಸಲು ಸರಿಯಾದ ಸಮಯ ಎಂದೆನಿಸಿತು. ಈ ದಿನದಂದು ಅಲ್ಲಿ ಶಾಲಾ ವಿದ್ಯಾರ್ಥಿಗಳು ಮತ್ತು ಸಾಮಾಜಿಕ ಸಂಸ್ಥೆಗಳು ಒಗ್ಗೂಡಿ ಗಿಡ ನೆಡುವುದು, ಸ್ವಚ್ಛತೆ ಕಾರ್ಯಕ್ರಮ ಮುಂತಾದವುಗಳನ್ನು ನಡೆಸುತ್ತಾರೆ. ಪರಿಸರಸ್ನೇಹಿ ಜೀವನಪದ್ಧತಿ ಅಳವಡಿಸಿಕೊಳ್ಳುವ ಕುರಿತು ಅರಿವು ಮೂಡಿಸಲಾಗುತ್ತದೆ. ಭಾರತದಲ್ಲೂ ಭೂಮಿ ದಿನದ ಅಂಗವಾಗಿ ಪ್ರತಿವರ್ಷ ಹಲವಾರು ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.

Leave a Reply