ಮೈಸೂರಿನ ಚಾಮುಂಡಿ ಬೆಟ್ಟವು ಹಿಂದೆ ‘ಮಹಾಬಲಾದ್ರಿ’ ಅಥವಾ ‘ಮಹಾಬಲ ಬೆಟ್ಟ’ ಎಂದು ಕರೆಯಲ್ಪಡುತ್ತಿತ್ತು. ಇದರ ಮೂಲ ದೇವರು ಚಾಮುಂಡೇಶ್ವರಿ ಅಲ್ಲ, ಬದಲಿಗೆ ಮಹಾಬಲೇಶ್ವರ (ಶಿವ) ಎಂದು ಕ್ರಿ.ಶ. ೯೫೦ರ ಶಾಸನಗಳು ದೃಢಪಡಿಸುತ್ತವೆ. ಯದುವಂಶದ ಅರಸರು ಚಾಮುಂಡೇಶ್ವರಿಯನ್ನು ಕುಲದೇವತೆಯಾಗಿ ಸ್ವೀಕರಿಸಿದ ನಂತರ ಆಕೆಯ ಮಹಿಮೆ ಹೆಚ್ಚಾಯಿತು. ಮಹಾಬಲೇಶ್ವರ ದೇವಸ್ಥಾನವು ಚಾಮುಂಡಿ ಬೆಟ್ಟದ ಅತ್ಯಂತ ಹಳೆಯ ದೇವಾಲಯವಾಗಿದೆ.
ಮೈಸೂರಿನ ಚಾಮುಂಡಿ ಬೆಟ್ಟ ಇಂದು ವಿಶ್ವಪ್ರಸಿದ್ಧ ಪ್ರವಾಸಿ ತಾಣ ಹಾಗೂ ಧಾರ್ಮಿಕ ಕೇಂದ್ರ. ಆದರೆ ಸಾವಿರಾರು ವರ್ಷಗಳ ಹಿಂದೆ ಈ ಬೆಟ್ಟವನ್ನು ‘ಮಹಾಬಲಾದ್ರಿ’ ಅಥವಾ ‘ಮಹಾಬಲ ಬೆಟ್ಟ’ ಎಂದು ಕರೆಯಲಾಗುತ್ತಿತ್ತು. ಇಲ್ಲಿನ ಮೂಲ ದೇವರು ಚಾಮುಂಡೇಶ್ವರಿಯಲ್ಲ, ಬದಲಾಗಿ ಮಹಾಬಲೇಶ್ವರ (ಶಿವ) ಕ್ರಿ.ಶ. ೯೫೦ರ ಸುಮಾರಿನ ಶಾಸನಗಳ ಪ್ರಕಾರ, ಈ ಬೆಟ್ಟದ ಪ್ರಮುಖ ದೇವರು ಮಹಾಬಲೇಶ್ವರ ಸ್ವಾಮಿ. ಚಾಮುಂಡೇಶ್ವರಿ ದೇವಿಯನ್ನು ಆಗ ‘ಮಬ್ಬಲದ ದೇವಿ’ ಅಥವಾ ‘ಮಹಾಲಕ್ಷ್ಮಿ’ ಎಂದು ಕರೆಯಲಾಗುತ್ತಿತ್ತು ಮತ್ತು ಆಕೆ ಈ ಶಿವನ ದೇವಸ್ಥಾನದ ಪಾರ್ಶ್ವದೇವತೆಯಾಗಿದ್ದಳು.
ಯದುವಂಶದ ಅರಸರು (ಮೈಸೂರು ಒಡೆಯರು) ಚಾಮುಂಡೇಶ್ವರಿ ದೇವಿಯನ್ನು ತಮ್ಮ ಕುಲದೇವತೆಯಾಗಿ ಸ್ವೀಕರಿಸಿದ ನಂತರ, ದೇವಿಯ ಮಹಿಮೆ ಹೆಚ್ಚಾಯಿತು. ೧೭ನೇ ಶತಮಾನದ ನಂತರ ‘ಮಹಾಬಲ ಬೆಟ್ಟ’ ಎಂಬ ಹೆಸರು ಮರೆಯಾಗಿ ‘ಚಾಮುಂಡಿ ಬೆಟ್ಟ’ ಎಂಬ ಹೆಸರು ಪ್ರಸಿದ್ಧಿಗೆ ಬಂತು.
ಚಾಮುಂಡೇಶ್ವರಿ ದೇವಸ್ಥಾನದ ಅತ್ಯಂತ ಸಮೀಪದಲ್ಲೇ ಇರುವ ಮಹಾಬಲೇಶ್ವರ ದೇವಸ್ಥಾನ ಚಾಮುಂಡಿ ಬೆಟ್ಟದ ಅತ್ಯಂತ ಹಳೆಯ ದೇವಾಲಯವಾಗಿದೆ. ಜತೆಗೆ ಇದು ಚಾಮುಂಡೇಶ್ವರಿ ದೇವಾಲಯಕ್ಕಿಂತಲೂ ಮಹಾಬಲೇಶ್ವರ ದೇವಾಲಯ ಹಳೆಯದು. ಇದು ಹೊಯ್ಸಳ ಮತ್ತು ಗಂಗರ ಕಾಲದ ವಾಸ್ತುಶಿಲ್ಪವನ್ನು ಹೊಂದಿದೆ.
ತಾಂತ್ರಿಕ ಮತ್ತು ಧಾರ್ಮಿಕ ದೃಷ್ಟಿಯಿಂದ ‘ಶಿವ’ ಮತ್ತು ‘ಶಕ್ತಿ’ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಚಾಮುಂಡೇಶ್ವರಿ (ಶಕ್ತಿ) ಮಹಿಷಾಸುರನನ್ನು ಸಂಹರಿಸಿದ ನಂತರ ಈ ಬೆಟ್ಟದಲ್ಲಿ ನೆಲೆಸಿದಳು ಎಂಬುದು ಪುರಾಣ. ಆದರೆ, ಕ್ಷೇತ್ರ ದೇವತೆಯಾಗಿ ಮೊದಲಿದ್ದದ್ದು ಶಿವನೇ (ಮಹಾಬಲೇಶ್ವರ). ಮೊದಲು ಮಹಾಬಲೇಶ್ವರನ ದರ್ಶನ ಪಡೆದು, ನಂತರ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯುವುದು ಪದ್ಧತಿ.
ಸ್ಕಂದ ಪುರಾಣದ ಪ್ರಕಾರ, ಈ ಬೆಟ್ಟವನ್ನು ‘ತ್ರಯಂಬಕ ಶಿಖರ’ ಎಂದೂ ಕರೆಯಲಾಗುತ್ತಿತ್ತು. ಇಲ್ಲಿ ಆದಿಶಕ್ತಿಯು ಚಾಮುಂಡಿಯ ಅವತಾರ ತಾಳಿ ಬೆಟ್ಟದ ಮೇಲಿದ್ದ ರಾಕ್ಷಸರನ್ನು ಸಂಹರಿಸಿದಳು. ಅವಳ ವೀರಾವೇಶವನ್ನು ಕಂಡು ದೇವತೆಗಳು ಪ್ರಾರ್ಥಿಸಿದಾಗ, ಭಕ್ತರ ರಕ್ಷಣೆಗಾಗಿ ಆಕೆ ಅಲ್ಲೇ ನೆಲೆಸಿದಳು. ಒಡೆಯರ್ ರಾಜವಂಶದ ಪ್ರಥಮ ದೊರೆ ಯದುರಾಯರಿಗೆ ಚಾಮುಂಡೇಶ್ವರಿ ದೇವಿ ಕನಸಿನಲ್ಲಿ ಬಂದು ಮಾರ್ಗದರ್ಶನ ನೀಡಿದಳು ಎಂಬ ನಂಬಿಕೆ ಇದೆ, ಅಲ್ಲಿಂದ ಈ ದೇವಾಲಯ ರಾಜಮನೆತನದ ಆಶ್ರಯದಲ್ಲಿ ವಿಜೃಂಭಿಸಿತು.

Leave a Reply