ಕಾಂಗ್ರೆಸ್–ಬಿಜೆಪಿ ನಡುವೆ ಜಾಹೀರಾತು ಸಮರ

ಕಾಂಗ್ರೆಸ್–ಬಿಜೆಪಿ ನಡುವೆ ಜಾಹೀರಾತು ಸಮರ

ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ರಾಜಕೀಯ ಜಾಹೀರಾತು ಸಮರ ತೀವ್ರಗೊಂಡಿದ್ದು, ವಿಬಿ–ಜಿ ರಾಮ್ ಜಿ ಯೋಜನೆ ಜಾಹೀರಾತಿನ ಮೂಲಕ ಬಿಜೆಪಿ ಕಾಂಗ್ರೆಸ್‌ಗೆ ತಿರುಗೇಟು ನೀಡಿದೆ. ಈ ಹಿಂದೆ ಕಾಂಗ್ರೆಸ್ ಸರ್ಕಾರ ಮನ್ರೇಗಾ ಯೋಜನೆ ಕುರಿತಾಗಿ ಜಾಹೀರಾತುಗಳನ್ನು ಬಿಡುಗಡೆ ಮಾಡಿದ್ದು, ಅದಕ್ಕೆ ಪ್ರತಿಯಾಗಿ ಬಿಜೆಪಿ ಇದೀಗ ಕೇಂದ್ರ ಸರ್ಕಾರದ ವಿಬಿ–ಜಿ ರಾಮ್ ಜಿ ಕಾಯಿದೆಯನ್ನು ಮುಂದಿಟ್ಟುಕೊAಡು ಪ್ರಚಾರಕ್ಕೆ ಇಳಿದಿದೆ.

ಶ್ರಮಿಕರ ಬದುಕಿಗೆ ಭರವಸೆಯ ಯೋಜನೆಯಾಗಿ ವಿಬಿ–ಜಿ ರಾಮ್ ಜಿ ಕಾಯಿದೆಯನ್ನು ಬಿಂಬಿಸಿರುವ ಬಿಜೆಪಿ, ಈ ಜಾಹೀರಾತಿನಲ್ಲಿ ಕಾರ್ಮಿಕರ ಕಲ್ಯಾಣ ಹಾಗೂ ಉದ್ಯೋಗ ಭದ್ರತೆ ಪ್ರಮುಖ ಅಂಶಗಳಾಗಿವೆ ಎಂದು ಹೇಳಿದೆ. ಮನ್ರೇಗಾ ಕುರಿತು ಕಾಂಗ್ರೆಸ್ ಸರ್ಕಾರ ನೀಡಿದ್ದ ಜಾಹೀರಾತುಗಳಿಗೆ ತೀವ್ರ ಪ್ರತಿಕ್ರಿಯೆಯಾಗಿ ಈ ಪ್ರಚಾರ ರೂಪುಗೊಂಡಿದೆ ಎನ್ನಲಾಗಿದೆ.

ಕಾಂಗ್ರೆಸ್ ಸರ್ಕಾರ ಮನ್ರೇಗಾ ಯೋಜನೆ ಬಗ್ಗೆ ರಾಜಕೀಯ ಲಾಭಕ್ಕಾಗಿ ಜಾಹೀರಾತು ಮಾಡುತ್ತಿದೆ ಎಂದು ಬಿಜೆಪಿ ಕಿಡಿಕಾರಿದ್ದು, ವಿಬಿ–ಜಿ ರಾಮ್ ಜಿ ಕಾಯಿದೆಯ ಪ್ರಮುಖ ಅಂಶಗಳನ್ನು ಜನರಿಗೆ ತಿಳಿಸುವುದು ತಮ್ಮ ಉದ್ದೇಶ ಎಂದು ಸ್ಪಷ್ಟಪಡಿಸಿದೆ.

ಇದೇ ವೇಳೆ, ಬಿಜೆಪಿ ಜಾಹೀರಾತಿನಲ್ಲಿ “ನಕಲಿ ಗಾಂಧಿಗಳಿಂದ ಮಹಾತ್ಮ ಗಾಂಧೀಜಿಗೆ ಅವಮಾನ” ಎಂಬ ಹೇಳಿಕೆ ಉಲ್ಲೇಖವಾಗಿದ್ದು, ಮಹಾತ್ಮ ಗಾಂಧೀಜಿ ಸ್ವಾತಂತ್ರ‍್ಯ ನಂತರ ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸಬೇಕು ಎಂದು ಹೇಳಿದ್ದರು ಎಂದು ಬಿಜೆಪಿ ಆರೋಪಿಸಿದೆ. ಆದರೆ ಅವರ ಹೆಸರನ್ನು ಬಳಸಿಕೊಂಡು ಕೆಲವರು ರಾಜಕೀಯ ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಮಹಾತ್ಮ ಗಾಂಧೀಜಿಯ ಕನಸಾದ ಸ್ವಚ್ಛ ಭಾರತ್ ಅಭಿಯಾನವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಜಾರಿಗೆ ತಂದಿದ್ದಾರೆ ಎಂದು ಬಿಜೆಪಿ ಸಮರ್ಥಿಸಿಕೊಂಡಿದ್ದು, ಕೇಂದ್ರ ಸರ್ಕಾರದ ಯೋಜನೆಗಳು ಹಾಗೂ ಮೋದಿ ಸರ್ಕಾರದ ಸಾಧನೆಗಳನ್ನು ಜಾಹೀರಾತಿನ ಮೂಲಕ ಮುಂದಿಟ್ಟಿದೆ. ಕೇಂದ್ರ–ರಾಜ್ಯ ರಾಜಕೀಯ ಪೈಪೋಟಿಯ ನಡುವೆಯೇ, ಜಾಹೀರಾತುಗಳ ಮೂಲಕ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸಮರ ಮತ್ತಷ್ಟು ತೀವ್ರಗೊಂಡಿದೆ.

Leave a Reply

Your email address will not be published.