ಅಮೆರಿಕ ಸುಪ್ರೀಂ ಕೋರ್ಟ್ನಲ್ಲಿ ಟ್ರಂಪ್ ಸೊಕ್ಕು ಮುರಿಯಲು ಕಾರಣರಾಗಿದ್ದು ಭಾರತೀಯ ಮೂಲದ ವಕೀಲ ನೀಲ್ ಕತ್ಯಾಲ್?
ಅಮೆರಿಕ ಸುಪ್ರೀಂ ಕೋರ್ಟ್ನಲ್ಲಿ ಟ್ರಂಪ್‌ನ ಸುಂಕ ನೀತಿಗಳಿಗೆ ಭಾರೀ ಹಿನ್ನಡೆಯಾಗಲು ಭಾರತೀಯ ಮೂಲದ ವಕೀಲ ನೀಲ್ ಕತ್ಯಾಲ್ ಕಾರಣರಾಗಿದ್ದಾರೆ. ಸಣ್ಣ ಉದ್ಯಮಿಗಳ ಪರವಾಗಿ ವಾದಿಸಿದ ಕತ್ಯಾಲ್ ೬-೩ ಅನುಪಾತದಲ್ಲಿ ಮಹತ್ವದ ತೀರ್ಪು ಪ್ರಕಟವಾಗಲು ಕಾರಣರಾದರು. ಇದು ಭಾರತ ಸೇರಿದಂತೆ ಹಲವು ದೇಶಗಳಿಗೆ ಅನುಕೂಲಕರವಾಗಿದೆ.
ಭಾರತವೂ ಸೇರಿದಂತೆ ವಿವಿಧ ದೇಶಗಳ ಉತ್ಪನ್ನಗಳ ಆಮದಿನ ಮೇಲೆ ಯದ್ವಾತದ್ವಾ ಸುಂಕ ವಿಧಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಅಲ್ಲಿನ ಸುಪ್ರೀಂ ಕೋರ್ಟ್ ತೀರ್ಪು ಭಾರೀ ಹಿನ್ನಡೆ ಉಂಟುಮಾಡಿದೆ. ಅಮೆರಿಕ ಸುಪ್ರೀಂ ಕೋರ್ಟ್ ತೀರ್ಪಿನಿಂದ ಸದ್ಯದ ಮಟ್ಟಿಗೆ ಭಾರತಕ್ಕೂ ಪ್ರಯೋಜನವಾಗಿದೆ. ಅಂದಹಾಗೆ, ಟ್ರಂಪ್ ಸೊಕ್ಕುಮುರಿಯುವಂತಹ ತೀರ್ಪು ಬರುವುದಕ್ಕೆ ಕಾರಣರಾಗಿದ್ದು ಕೂಡ ಭಾರತೀಯ ಮೂಲದವರೇ! ಸುಪ್ರೀಂ ಕೋರ್ಟ್ಮಲ್ಲಿ ೬-೩ ಅನುಪಾತದಲ್ಲಿ ಪ್ರಕಟವಾದ ತೀರ್ಪು ಅಮೆರಿಕದ ಹಾಗೂ ಜಾಗತಿಕ ಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ತೀರ್ಪು ಬರುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಭಾರತೀಯ ಮೂಲದ ಅಮೆರಿಕನ್ ವಕೀಲ ನೀಲ್ ಕತ್ಯಾಲ್ ಎಂಬುದು ಗಮನಾರ್ಹ.
ನೀಲ ಕತ್ಯಾಲ್ ಭಾರತೀಯ ಮೂಲದ ವ್ಯಕ್ತಿ ಹಾಗೂ ಪ್ರಸಿದ್ಧ ಅಮೆರಿಕನ್ ವಕೀಲ. ಇವರ ತಂದೆ-ತಾಯಿ ಭಾರತೀಯ ಮೂಲದವರು. ತಾಯಿ ಪ್ರತಿಭಾ ಮಕ್ಕಳ ತಜ್ಞೆಯಾಗಿದ್ದು, ತಂದೆ ಸುಂದರ್ ಎಂಜಿನಿಯರ್ ಆಗಿದ್ದರು. ೧೯೭೦ರ ಮಾರ್ಚ್ ೧೨ ರಂದು ಷಿಕಾಗೋದಲ್ಲಿ ಜನಿಸಿದ ಕತ್ಯಾಲ್ ಕಾನೂನು ಪದವಿ ಪಡೆದಿದ್ದಾರೆ.
ಕತ್ಯಾಲ್ ಅಮೆರಿಕ ನ್ಯಾಯಾಂಗ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ್ದ ಅನುಭವ ಹೊಂದಿದ್ದು, ಸಾಲಿಸಿಟರ್ ಜನರಲ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಜಾರ್ಜ್ಟೌನ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ೫೦ಕ್ಕೂ ಪ್ರಮುಖ ಹೆಚ್ಚು ಪ್ರಕರಣಗಳ ಬಗ್ಗೆ ಸುಪ್ರೀಂ ಕೋರ್ಟ್ನಲ್ಲಿ ವಾದಿಸಿದ ಅನುಭವ ಹೊಂದಿದ್ದಾರೆ.
ಸದ್ಯ ಕತ್ಯಾಲ್ ಅವರು ಹೆಚ್ಚುವರಿ ಸುಂಕ ವಿಧಿಸಿದ ಪ್ರಕರಣದಲ್ಲಿ ಸಣ್ಣ ಉದ್ಯಮಿಗಳ ಪರವಾಗಿ ವಾದ ಮಂಡಿಸಿದ್ದರು. ತೀರ್ಪು ಪ್ರಕಟವಾದ ಬಳಿಕ, ನಾವು ಕೇಳಿದ್ದನ್ನೆಲ್ಲಾ ಸುಪ್ರೀಂ ಕೋರ್ಟ್ ನೀಡಿದೆ. ನಗೆ ಸಂಪೂರ್ಣ ಜಯ ದೊರಕಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ.
ಅವರಿಗೆ ಅಮೆರಿಕ ನ್ಯಾಯಾಂಗ ಇಲಾಖೆಯಿಂದ ನೀಡುವ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಎಡ್ಮಂಡ್ ಜೆ. ರ್ಯಾಂಡಾಲ್ಫ್ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಲಭಿಸಿವೆ. ೨೦೧೭ರಲ್ಲಿ ‘ಲಿಟಿಗೇಟರ್ ಆಫ್ ದಿ ಇಯರ್’ ಪ್ರಶಸ್ತಿಗೂ ಭಾಜನರಾಗಿದ್ದರು.
ಅಧ್ಯಕ್ಷರು ಶಕ್ತಿಶಾಲಿಗಳಾಗಿರಬಹುದು, ಆದರೆ ಸಂವಿಧಾನ ಅದಕ್ಕಿಂತಲೂ ಶಕ್ತಿಶಾಲಿ. ಅಮೆರಿಕದಲ್ಲಿ ತೆರಿಗೆ ವಿಧಿಸುವ ಅಧಿಕಾರ ಕಾಂಗ್ರೆಸ್‌ಗೆ ಮಾತ್ರ ಸೀಮಿತ ಎಂಬ ಸಂದೇಶವನ್ನು ಸುಪ್ರೀಂ ಕೋರ್ಟ್ ನೀಡಿದೆ ಎಂದು ತೀರ್ಪಿನ ಮಹತ್ವವನ್ನು ಕತ್ಯಾಲ್ ವಿವರಿಸಿದ್ದಾರೆ. ಈ ಪ್ರಕರಣ ಹಾಗೂ ತೀರ್ಪು ಯಾವುದೇ ಒಬ್ಬ ಅಧ್ಯಕ್ಷರ ಬಗ್ಗೆ ಅಲ್ಲ. ಇದು ಅಧಿಕಾರ ವಿಭಜನೆ ಮತ್ತು ಸಂವಿಧಾನಾತ್ಮಕ ಮೌಲ್ಯಗಳ ರಕ್ಷಣೆಯ ಬಗ್ಗೆ ಎಂದು ಕತ್ಯಾಲ್ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪಿಗೆ ಟ್ರಂಪ್ ಪ್ರತಿಕ್ರಿಯೆ ಏನು?
ತೀರ್ಪಿನ ಬಳಿಕ ಟ್ರಂಪ್ ಕೆಲವು ನ್ಯಾಯಮೂರ್ತಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ತೀರ್ಪಿನ ಪರಿಣಾಮವಾಗಿ ಅಮೆರಿಕ ಇತರೆ ರಾಷ್ಟ್ರಗಳೊಂದಿಗೆ ಈಗಾಗಲೇ ಹೊಂದಿರುವ ವ್ಯಾಪಾರ ಒಪ್ಪಂದಗಳ ಮೇಲೆ ಏನು ಪರಿಣಾಮ ಬೀಳಬಹುದು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಒಟ್ಟಿನಲ್ಲಿ, ಅಮೆರಿಕ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಭಾರತೀಯ ಮೂಲದ ವಕೀಲ ನೀಲ್ ಕತ್ಯಾಲ್ ವಹಿಸಿದ ಪಾತ್ರ ಭಾರತೀಯ ಮೂಲದ ಸಮುದಾಯಕ್ಕೆ ಹೆಮ್ಮೆಯ ವಿಷಯವಾಗಿದ್ದು, ಜಾಗತಿಕ ರಾಜಕೀಯ-ಆರ್ಥಿಕ ವಲಯದಲ್ಲಿ ಭಾರತೀಯರ ಪ್ರಭಾವ ಮತ್ತೊಮ್ಮೆ ಸಾಬೀತಾದದಂತಾಗಿದೆ.

Leave a Reply