ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಇತ್ತೀಚಿನ ಯುದ್ಧ ಪರಿಸ್ಥಿತಿ ಮತ್ತು ಉದ್ವಿಗ್ನತೆ ಜಾಗತಿಕ ವಿಮಾನಯಾನ ಮತ್ತು ಪ್ರವಾಸೋದ್ಯಮ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.
ಹಲವಾರು ದೇಶಗಳ ವಾಯುಪ್ರದೇಶಗಳಲ್ಲಿ ನಿರ್ಬಂಧಗಳು, ವಿಮಾನ ಮಾರ್ಗ ಬದಲಾವಣೆಗಳು ಹಾಗೂ ಅಚಾನಕ್ ವಿಮಾನ ರದ್ಧತಿಗಳು ಹೆಚ್ಚುತ್ತಿರುವುದರಿಂದ ಜಾಗತಿಕ ವಿಮಾನ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ಇದರ ಪರಿಣಾಮವಾಗಿ ಯುರೋಪ್, ಏಷ್ಯಾ ಮತ್ತು ಆಫ್ರಿಕಾ ನಡುವಿನ ಹಲವಾರು ವಿಮಾನ ಮಾರ್ಗಗಳಲ್ಲಿ ಪ್ರಯಾಣದ ವೆಚ್ಚವೂ ಗಣನೀಯವಾಗಿ ಏರಿಕೆಯಾಗಿದೆ.
ಭಾರತದ ದೃಷ್ಟಿಯಿಂದ ಈ ಪರಿಸ್ಥಿತಿ ವಿಶೇಷವಾಗಿ ಗಂಭೀರವಾಗಿದೆ. ಭಾರತದಿಂದ ವಿಶ್ವದ ಅನೇಕ ದೇಶಗಳಿಗೆ ಹೋಗುವ ವಿಮಾನ ಸಂಚಾರವು ಬಹುಪಾಲು ಮಧ್ಯಪ್ರಾಚ್ಯದ ಪ್ರಮುಖ ಹಬ್‌ಗಳಾದ ದುಬೈ, ದೋಹಾ ಮತ್ತು ಅಬುಧಾಬಿ ಮೂಲಕ ಸಾಗುತ್ತದೆ. ಈ ಮಾರ್ಗಗಳಲ್ಲಿ ಉಂಟಾಗಿರುವ ವ್ಯತ್ಯಯಗಳಿಂದ ವಿಮಾನ ಸೇವೆಗಳ ವೇಳಾಪಟ್ಟಿಯಲ್ಲಿ ಬದಲಾವಣೆಗಳು ಕಂಡುಬರುತ್ತಿದ್ದು, ಪ್ರಯಾಣ ವೆಚ್ಚ ಹೆಚ್ಚಳದಿಂದ ಅನೇಕರು ತಮ್ಮ ಪ್ರಯಾಣವನ್ನು ಮುಂದೂಡಲು ಅಥವಾ ರದ್ದುಗೊಳಿಸಲು ಮುಂದಾಗುತ್ತಿದ್ದಾರೆ.
ಸಾಮಾನ್ಯವಾಗಿ ಅರಬ್ ರಾಷ್ಟ್ರಗಳು ಮತ್ತು ಮಧ್ಯಪ್ರಾಚ್ಯ ದೇಶಗಳಿಂದ ಪ್ರತಿದಿನವೂ ಸುಮಾರು ೨೫ ರಿಂದ ೩೦ ವಿಮಾನಗಳು ಪ್ರಯಾಣಿಕರನ್ನು ಬೆಂಗಳೂರಿಗೆ ಕರೆತರುತ್ತಿದ್ದವು. ಆದರೆ ಇತ್ತೀಚಿನ ಯುದ್ಧ ಪರಿಸ್ಥಿತಿ ಮತ್ತು ಆಕ್ರಮಣಕಾರಿ ಭದ್ರತಾ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಅನೇಕ ವಿಮಾನ ಕಂಪನಿಗಳು ತಮ್ಮ ಹಾರಾಟವನ್ನು ಸ್ಥಗಿತಗೊಳಿಸಿರುವುದರಿಂದ ಈ ಸಂಪರ್ಕ ಗಂಭೀರವಾಗಿ ಕುಂಠಿತವಾಗಿದೆ. ಇದರ ಪರಿಣಾಮವಾಗಿ ದೇಶಾದ್ಯಂತ ವಿಮಾನಯಾನ ಪ್ರಯಾಣಿಕರ ಸಂಖ್ಯೆಯಲ್ಲಿ ಸುಮಾರು ೪೦%ರವರೆಗೆ ಕುಸಿತ ಕಂಡುಬAದಿದ್ದು, ಬೆಂಗಳೂರಿನAತಹ ಪ್ರಮುಖ ಅಂತಾರಾಷ್ಟ್ರೀಯ ಪ್ರವೇಶ ದ್ವಾರಕ್ಕೆ ಇದು ನೇರ ಹೊಡೆತ ನೀಡಿದೆ.
ಮಧ್ಯಪ್ರಾಚ್ಯ ಪ್ರದೇಶವು ಭಾರತೀಯ ಪ್ರವಾಸಿಗರಿಗಾಗಿ ಪ್ರಮುಖ ಕೇಂದ್ರವಾಗಿದೆ. ಪ್ರತಿ ವರ್ಷ ಸುಮಾರು ೮ ರಿಂದ ೯ ಮಿಲಿಯನ್ ಭಾರತೀಯರು ಗಲ್ಫ್ ರಾಷ್ಟ್ರಗಳಿಗೆ ಪ್ರಯಾಣಿಸುತ್ತಾರೆ, ಜೊತೆಗೆ ಸುಮಾರು ೧೩ ಮಿಲಿಯನ್ ಭಾರತೀಯರು ಆ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ ಮತ್ತು ಉದ್ಯೋಗದಲ್ಲಿದ್ದಾರೆ. ಈ ನಿರಂತರ ಸಂಚಾರದಲ್ಲಿ ಉಂಟಾಗುವ ವ್ಯತ್ಯಯವು ಭಾರತದ ಪ್ರವಾಸೋದ್ಯಮ ಮತ್ತು ವಿಮಾನಯಾನ ಕ್ಷೇತ್ರಕ್ಕೆ ಗಂಭೀರ ಪರಿಣಾಮ ಬೀರುತ್ತದೆ.
ಇದರ ಜೊತೆಗೆ ವೈದ್ಯಕೀಯ ಪ್ರವಾಸೋದ್ಯಮಕ್ಕೂ ಇದರಿಂದ ಹೊಡೆತ ಬೀಳುವ ಸಾಧ್ಯತೆ ಇದೆ. ಭಾರತವು ಕಡಿಮೆ ವೆಚ್ಚದಲ್ಲಿ ಉತ್ತಮ ವೈದ್ಯಕೀಯ ಸೇವೆ ನೀಡುವ ದೇಶವಾಗಿ ಜಾಗತಿಕವಾಗಿ ಪ್ರಸಿದ್ಧವಾಗಿದೆ. ಪ್ರತಿ ವರ್ಷ ಸುಮಾರು ೬ ರಿಂದ ೭ ಲಕ್ಷ ವಿದೇಶಿ ರೋಗಿಗಳು ಚಿಕಿತ್ಸೆಗಾಗಿ ಭಾರತಕ್ಕೆ ಬರುತ್ತಾರೆ, ಇವರಲ್ಲಿ ಗಮನಾರ್ಹ ಸಂಖ್ಯೆಯವರು ಗಲ್ಫ್ ರಾಷ್ಟ್ರಗಳಿಂದಲೇ ಬರುತ್ತಾರೆ. ವಿಮಾನ ಸಂಚಾರದಲ್ಲಿ ಉಂಟಾಗಿರುವ ಅಡಚಣೆಗಳು ಮತ್ತು ಹೆಚ್ಚುತ್ತಿರುವ ಪ್ರಯಾಣ ವೆಚ್ಚದಿಂದ ಈ ಕ್ಷೇತ್ರವೂ ಕುಸಿತ ಎದುರಿಸುವ ಸಾಧ್ಯತೆ ಇದೆ.
ಒಂದೆಡೆ ಮಧ್ಯಪ್ರಾಚ್ಯ ಸಂಘರ್ಷದಿAದ ಜಗತ್ತು ಇಂಧನ ಬಿಕ್ಕಟ್ಟು ಎದುರಿಸುತ್ತಿರುವ ಸಂದರ್ಭದಲ್ಲಿ ಅಮೆರಿಕ ಮಹತ್ವದ ಹೇಳಿಕೆ ನೀಡಿದೆ. ಸಮುದ್ರದಲ್ಲಿ ಸಿಲುಕಿರುವ ಇರಾನ್‌ನ ೧೪೦ ಮಿಲಿಯನ್ ಬ್ಯಾರೆಲ್ ತೈಲವನ್ನು ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಹೇಳಿದೆ. ಈ ಬಗ್ಗೆ ಅಮೆರಿಕದ ಖಜಾನೆ ಸಚಿವ ಸ್ಕಾಟ್ ಬೆಸೆಂಟ್ ಎಕ್ಸ್ ಸಂದೇಶ ಪ್ರಕಟಿಸಿದ್ದಾರೆ.
ಬೆಸೆಂಟ್ ಹೇಳಿಕೆಯ ಪ್ರಕಾರ, ಜಾಗತಿಕ ಉಗ್ರ ಚಟುವಟಿಕೆಗಳಿಗೆ ಇರಾನ್ ಪ್ರಮುಖ ಕಾರಣವಾಗಿದ್ದು, ಅದನ್ನು ನಿಯಂತ್ರಿಸಲು ‘ಆಪರೇಷನ್ ಎಪಿಕ್ ಫ್ಯೂರಿ’ ಹೆಸರಿನ ಕ್ರಮಗಳನ್ನು ಅಮೆರಿಕ ವೇಗವಾಗಿ ಮುಂದುವರೆಸುತ್ತಿದೆ. ಇರಾನ್ ನಡೆಸಿದ ಇಂಧನ ಮೂಲಸೌಕರ್ಯಗಳ ಮೇಲಿನ ದಾಳಿಗಳಿಗೆ ಪ್ರತಿಯಾಗಿ ಅಮೆರಿಕ ತನ್ನ ಆರ್ಥಿಕ ಹಾಗೂ ಸೈನಿಕ ಶಕ್ತಿಯನ್ನು ಬಳಸುತ್ತಿದೆ.
ಇದಕ್ಕೂ ಮಧ್ಯೆ, ಸಮುದ್ರದಲ್ಲಿ ಸಿಲುಕಿರುವ ಇರಾನ್ ತೈಲವನ್ನು ತಾತ್ಕಾಲಿಕವಾಗಿ ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಮಾಡಲು ಅಮೆರಿಕ ನಿರ್ಧರಿಸಿದೆ. ಸುಮಾರು ೧೪೦ ಮಿಲಿಯನ್ ಬ್ಯಾರೆಲ್ ತೈಲವನ್ನು ಮಾರುಕಟ್ಟೆಗೆ ತರಲು ಈ ಕ್ರಮ ನೆರವಾಗಲಿದೆ. ಇದರಿಂದ ಜಾಗತಿಕ ತೈಲ ಸರಬರಾಜು ಹೆಚ್ಚಾಗಿ ಬೆಲೆ ಸ್ಥಿರತೆ ಸಾಧಿಸಲು ಸಹಾಯವಾಗಲಿದೆ ಎಂದು ಬೆಸೆಂಟ್ ತಿಳಿಸಿದ್ದಾರೆ.
ಇರಾನ್ ತೈಲವನ್ನು ಕಡಿಮೆ ದರದಲ್ಲಿ ಚೀನಾ ಸಂಗ್ರಹಿಸುತ್ತಿದೆ ಎಂಬ ಆರೋಪವನ್ನೂ ಬೆಸೆಂಟ್ ಮಾಡಿದ್ದಾರೆ. ಈ ತೈಲವನ್ನು ಮಾರುಕಟ್ಟೆಗೆ ಬಿಡುವುದರಿಂದ ಇರಾನ್‌ನ ಆರ್ಥಿಕ ಪ್ರಭಾವ ಕಡಿಮೆಯಾಗಲಿದೆ ಎಂಬುದು ಅಮೆರಿಕದ ಲೆಕ್ಕಾಚಾರ. ಒಟ್ಟಿನಲ್ಲಿ, ಇರಾನ್ ವಿರುದ್ಧದ ಒತ್ತಡ ಮುಂದುವರಿಯುವ ಸೂಚನೆಗಳ ನಡುವೆ, ಜಾಗತಿಕ ತೈಲ ಮಾರುಕಟ್ಟೆಯನ್ನು ಸಮತೋಲನದಲ್ಲಿಡಲು ಅಮೆರಿಕ ತೆಗೆದುಕೊಂಡಿರುವ ಈ ಕ್ರಮ ಗಮನ ಸೆಳೆಯುತ್ತಿದೆ.

Leave a Reply